ಕೋಟಿತೀರ್ಥ

	ಭಾರತದಲ್ಲಿ ಈ ಹೆಸರಿನ ಅನೇಕ ತೀರ್ಥಗಳಿವೆ. ಬ್ರಹ್ಮ, ಮತ್ಸ್ಯ, ವರಾಹ, ವಾಮನ ಪುರಾಣಗಳಲ್ಲಿ ಇವುಗಳ ಉಲ್ಲೇಖವಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿರುವ ಕಾಲಿಂಜರ ಗ್ರಾಮದಲ್ಲೂ ಗೋಕರ್ಣ, ಮಧುರೆ, ರಾಮೇಶ್ವರಗಳಲ್ಲೂ ಕೋಟಿತೀರ್ಥ ಎಂಬ ಹೆಸರಿನ ಪುಣ್ಯತೀರ್ಥಗಳಿವೆ. ಗೋಕರ್ಣದ ಕೋಟಿತೀರ್ಥ ಮೈಸೂರು ರಾಜ್ಯದಲ್ಲಿ ಏಕಮೇವಾದ್ವಿತೀಯವೆನಿಸಿದೆ. ಶಿವರಾತ್ರಿಯ ವೇಳೆಯಲ್ಲಿ ದೇಶದ ನಾನಾ ಭಾಗಗಳ ಜನ ಗೋಕರ್ಣಕ್ಕೆ ಬಂದು ಈ ತೀರ್ಥದಲ್ಲಿ ಮೀಯುತ್ತಾರೆ. ತೀರ್ಥದ ನಾಲ್ಕು ಗೋಡೆಗಳೊಳಗೇ ಗುಡಿಗಳಿವೆ; ಹತ್ತಿರದಲ್ಲಿ ಮನೆಮಠಗಳಿವೆ. ಸಮೀಪದಲ್ಲೇ ಮಹಾಬಲೇಶ್ವರ ದೇವಸ್ಥಾನವಿದೆ.

	ಮತ್ಸ್ಯಾದಿ ಪುರಾಣಗಳ ಪ್ರಕಾರ ಮುಖ್ಯವಾದ ಕೋಟಿತೀರ್ಥ ಇರುವುದು ನರ್ಮದಾ ನದಿಯ ದಡದಲ್ಲಿ. ಇಲ್ಲಿ ಈಶ್ವರನಿಗೆ ಕೋಟೀಶ್ವರ ಎಂದು ಹೆಸರು. ಶಂಕರ ಇಲ್ಲಿ ಒಂದು ಕೋಟಿ ಅಸುರರನ್ನು ಕೊಂದನೆಂದು ಹೇಳಿಕೆ. ನರ್ಮದಾ ನದಿಯ ಉಗಮಸ್ಥಾನದಲ್ಲಿ ಹನ್ನೊಂದು ಕೋನಗಳ ಒಂದು ಸರೋವರವಿದೆ. ಇದನ್ನೂ ಕೋಟಿತೀರ್ಥವೆಂದೇ ಕರೆಯುತ್ತಾರೆ. ಇದರ ಸಮೀಪದಲ್ಲಿ ನರ್ಮದೇಶ್ವರ, ಅವರಕಂಟಕೇಶ್ವರ ದೇವಸ್ಥಾನಗಳಿವೆ.
ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಗೋದಾವರಿ ನದಿಯ ದಡದಲ್ಲೂ ಕೋಟಿತೀರ್ಥವೆಂಬ ಕ್ಷೇತ್ರವಿದೆ. ಇಲ್ಲಿ ಗೋದಾವರಿ ನದಿಯಲ್ಲಿ ಸ್ನಾನ ಮಾಡುವುದರಿಂದ ಕುಷ್ಠರೋಗ ಪರಿಹಾರವಾಗುತ್ತದೆಂಬ ನಂಬಿಕೆ ಇದೆ. 		(ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ